#

ಜಗದೀಶನ ಜಪಿಸೋ ಹಗಲೆಲ್ಲ

ಜಗದೀಶನ ಜಪಿಸೋ ಹಗಲೆಲ್ಲ ಈ ದೇಹವು ಸ್ಥಿರವಲ್ಲ |ಪ|

ಪೂರ್ವಪುಣ್ಯದ ಫಲದಿಂದ ಮಾನವ ಜನ್ಮಕೆ ನೀ ಬಂದೆ ಎಡಬಿಡದೆ ನುಡಿ ಶಿವನಾಮವನು ಕಡೆಮಾಡಿಕೊಳ್ಳೋ ತಮ್ಮ ಈ ನರಜನ್ಮವನು||1||

ಸತಿಸುತರು ನಿನ್ನವರಲ್ಲಾ ಮತಿಹೀನನಾಗಿ ಮೋಹಿಸಿದೆಲ್ಲಾ ತಂದೆ ತಾಯಿ ಬಂಧುಗಳೆಲ್ಲಾ ನಾಳೆ ನೀ ಹೋದ ಕಾಲಕೆ ಯಾರಿಲ್ಲಾ ||2||

ಗಳಿಸಿದ ಹಣವೆಲ್ಲ ಹೂಳಿಟ್ಟಿ ಸತ್ಪಾತ್ರದ ಹಾದಿಯ ಬಿಟ್ಟಿ ತುಂಬಿದ ಕೊಡ ತುಳುಕದು ಗಟ್ಟಿ ನೀ ಇದ್ದಾಗ ದಾನ ಮಾಡೋ ಮನಮುಟ್ಟಿ ||3||

ಕಪ್ಪೆಯ ಸರ್ಪವು ಕಂಡಂತೆ ಮೃತ್ಯುವು ನಿನ್ನನು ಕಾಯ್ದಂತೆ ಲಗು ಮಾಡಿಕೊಳ್ಳೋ ತಮ್ಮ ಈ ಸಂತೆ ಗುರು ಮಹಾಂತನ ಧ್ಯಾನವ ಮಾಡೋ ಮನಮುಟ್ಟಿ

ಮುಳುಗುಂದ ಬಾಲಲೀಲಾ ಮಹಾಂತಶಿವಯೋಗಿಗಳು