#

ಸಿಂದಗಿ ಗುರುಸ್ವಾಮಿ ಚಂದಿರನಂತೆ ಹೊಳೆದೆಪ್ಪಾ

ಸಿಂದಗಿ ಗುರುಸ್ವಾಮಿ ಚಂದಿರನಂತೆ ಹೊಳದೆಪ್ಪಾ ಬಂದ ಭಕ್ತರನು ಚಂದದಿ ಕರುಣಿಸು ನನ್ನಪ್ಪಾ ||ಪ||

ಶಿವನಪ್ಪಣೆ ಪಡೆದು ಧರಣಿಗೆ ಬಂದೆ ನೀನಪ್ಪಾ ಪ್ರಮಥರ ವಚನವನು ಪೇಳಿ ಪ್ರಜ್ಞೆ ಕೊಟ್ಟೆಪ್ಪಾ||1||

ಕಷ್ಟ ತರದಮಾಯೆ ಮೆಟ್ಟಿನಿಂತ ಗುರುವಪ್ಪಾ ಮದ ಮತ್ಸರಗಳನು ಕುಟ್ಟಿ ತೂರಿದೆ ನನ್ನಪ್ಪಾ||2||

ಶಾಂತಿಸಾಗರವೆಂಬ ವಾಣಿ ನಿನ್ನಲ್ಲಿಹುದಪ್ಪಾ ಭ್ರಾಂತಿವಂತರಿಗೆ ಶಾಂತಿ ನೀಡಿದೆ ನನ್ನಪ್ಪಾ ||3||

ಹಳ್ಳಿ ಹಳ್ಳಿಯ ತಿರುಗಿಧರ್ಮದ ಬೋಧೆಯ ಮಾಡಿದೆಯಪ್ಪಾ ಹಸಿದು ಬಂದವರಿಗೆ ಅನ್ನ ಕೊಟ್ಟೆ ನನ್ನಪ್ಪಾ ||4||

ಮಕ್ಕಳಿಲ್ಲದ ತಾಯಿ ಬಂದು ಬಿಕ್ಕಳಿಸಿದಳಪ್ಪಾ ಕಕ್ಕುಲತೆಯಿಂದ ಮಕ್ಕಳ ಕೊಟ್ಟೆ ನನ್ನಪ್ಪಾ ||5||

ಧರೆಯೊಳು ಮೆರೆಯುವ ಹಾವೇರಿ ಪುರದೊಳು ನೋಡಪ್ಪಾ ಸಿಂದಗಿ ಮಠಧೀಶ ಶ್ರೀ ಗುರು ಶಾಂತವೀರೇಶಾ ||6||